ನಾಯಕರು, ಮದುರೆಯ

ವಿಜಯನಗರದ ಒಂದು ಭಾಗವಾದ ಮದುರೆ ಪ್ರಾಂತ್ಯದ ಆಡಳಿತಕ್ಕಾಗಿ ನೇಮಕಹೊಂದಿ, ಕ್ರಮೇಣ ಸ್ವತಂತ್ರ ರಾಜರಂತೆ ಆಳಿದವರು. ಕೃಷ್ಣದೇವರಾಯರಿಂದ ಅಧಿಕಾರಕ್ಕೆ ಬಂದ ನಾಗಮನಾಯಕ ಇವರ ಮೂಲಪುರುಷ. ಇವನ ಅನಂತರ ವಿಶ್ವನಾಥ ನಾಯಕ ಆಳಿದ (1529-1564). ಇವನು ಮದುರೆಯ ಕೋಟೆಯನ್ನೂ ಸುಂದರೇಶ್ವರ ಮತ್ತು ಮೀನಾಕ್ಷಿ ದೇವಾಲಯವನ್ನು ನಿರ್ಮಿಸಿದ. ಈತ ಶ್ರೀರಂಗದ ದೇವಾಲಯವನ್ನು ಪುನರುಜ್ಜೀವನಗೊಳಿಸಿದ, ವ್ಯವಸಾಯ ಮತ್ತು ನೀರಾವರಿಗೆ ಹೆಚ್ಚು ಪ್ರಾಮುಖ್ಯ ಕೊಟ್ಟ . ಈತ ಒಳ್ಳೆಯ ಯೋಧ, ಆಡಳಿತಗಾರ. ಕೊಬ್ಬಿದ ಪಾಳೆಯಗಾರ 1ನೆಯ ತುಂಬಿಚ್ಚಿ ನಾಯಕನನ್ನು 1ನೆಯ ಕೃಷ್ಣಪ್ಪ ನಾಯಕ (1564-1572) ಅಡಗಿಸಿ, ಸಿಂಹಳದ (ಶ್ರೀಲಂಕಾ) ದೊರೆಯಿಂದ ಕಪ್ಪಕಾಣಿಕೆ ವಸೂಲು ಮಾಡಿದ. ಕೃಷ್ಣಾಪುರಂ, ತೆಪ್ಪಾಕುಲಂ ಮುಂತಾದ ಅಗ್ರಹಾರಗಳನ್ನೂ, ಕೆಲವು ದೇವಾಲಯಗಳನ್ನೂ ನಿರ್ಮಿಸಿದ. ಈತ ದಕ್ಷ ಆಡಳಿತಗಾರನೆಂದು ಪ್ರಸಿದ್ಧನಾಗಿದ್ದ.

1ನೆಯ ವೀರಪ್ಪ ನಾಯಕ (1572 -1595) ವಿಜಯನಗರದ ವಿಜಯ ಸಾಮಂತ ಇವನು ಚಿದಂಬರಂ, ಸೋಮೇಶ್ವರ ಮತ್ತು ಮೀನಾಕ್ಷಿ ದೇವಾಲಯಗಳನ್ನು ಅಭಿವೃದ್ಧಿಗೊಳಿಸಿದನಲ್ಲದೆ ಅಪಾರ ಸಂಪತ್ತನ್ನು ದಾನಮಾಡಿದ. ಈತ ಧರ್ಮಿಷ್ಠನೆಂದೂ, ನಿಷ್ಪಕ್ಷಪಾತ ಆಡಳಿತಗಾರನೆಂದೂ ಹೆಸರು ಪಡೆದ. 

2ನೆಯ ಕೃಷ್ಣಪ್ಪ ನಾಯಕನೂ (1595-1601) ವಿಧೇಯ ಸಾಮಂತ. ಇವನ ಕಾಲದಲ್ಲಿ ರಾಜ್ಯ ಸುಭದ್ರವಾಗಿ ಸುಖವಾಗಿತ್ತು. ಇವನ ತಮ್ಮ 3ನೆಯ ಕೃಷ್ಣಪ್ಪ ನಾಯಕ (1601-1609) ತೀರಪ್ರದೇಶದಲ್ಲಿ ಪೋರ್ಚುಗೀಸರನ್ನು ತಡೆಗಟ್ಟಲು ರಾಮನಾಡಿನ ಸೇತುಪತಿಗಳ ಆಡಳಿತ ಪದ್ದತಿಯನ್ನು ಸುವ್ಯವಸ್ಥೆಗೊಳಿಸಿದ. ಇವನು ಅಗ್ರಹಾರಗಳು, ಕೆರೆಗಳು ಮತ್ತು ದೇವಾಲಯಗಳನ್ನು ನಿರ್ಮಿಸಿದ. 2ನೆಯ ವೀರಪ್ಪ ನಾಯಕ (1609-1623) ವಿಜಯನಗರದ ವಿದ್ರೋಹಿ ಜಗ್ಗರಾಯನಿಗೆ ಸಹಾಯಕನಾಗಿ, ತಂಜಾವುರಿನ ನಾಯಕನಿಂದ ಪರಾಜಯ ಹೊಂದಿದ. ತಿರುಮಲ ನಾಯಕ (1623-1659) ಇವನ ತಮ್ಮ. ಇವನು ವಿಜಯನಗರದಿಂದ ಸ್ವತಂತ್ರನಾದ. ತಿರುವಾಂಕೂರು, ರಾಮನಾಡು, ಮದುರೆ ಇವುಗಳಿಗೆ ಮುತ್ತಿಗೆ ಹಾಕಿದ ಮೈಸೂರಿನ ಸೈನ್ಯವನ್ನು ಸೋಲಿಸಿದ. ಇವನ ಕಾಲದಲ್ಲಿ ತಿರುಚಿಯಿಂದ ಮದುರೆಗೆ ರಾಜಧಾನಿಯ ವರ್ಗವಾಯಿತು. ಇವನು ಆಡಳಿತವನ್ನು ಸುವ್ಯವಸ್ಥೆಗೊಳಿಸಿದ. ವಿಜಯನಗರದ 3ನೆಯ ಶ್ರೀರಂಗರಾಯನನ್ನು ಈತ ಎದುರಿಸಿದ. ತೀರಪ್ರದೇಶದಲ್ಲಿ ಕಾರ್ಯನಿರತರಾಗಿದ್ದ ಯುರೋಪಿಯನರಿಂದ  ಕಾಣಿಕೆಯನ್ನು ತೆಗೆದುಕೊಳ್ಳುತ್ತಿದ್ದ. ಈತ ಸಾಹಸಿ, ಉದಾರಿ ಮತ್ತು ಯೋಧ. ಇವನು ಕಲೆ, ವಾಸ್ತುಶಿಲ್ಪ ಮೊದಲಾದುವುಗಳಿಗೆ ಪೋಷಕನಾಗಿ ಪ್ರಸಿದ್ದನಾಗಿದ್ದ.

ಇವನ ತರುವಾಯ ಅನುಕ್ರಮವಾಗಿ ಮುತ್ತು ವೀರಪ್ಪ ನಾಯಕ ಮತ್ತು ಚೊಕ್ಕನಾಥ ನಾಯಕರು ಆಳಿದರು. ಚೊಕ್ಕನಾಥನ ಕಾಲದಲ್ಲಿ ರಾಜ್ಯದ ಅವನತಿ ಪ್ರಾರಂಭವಾಯಿತು. ಅವನ ಅನಂತರ ಮುತ್ತುವೀರಪ್ಪ ನಾಯಕ ಮತ್ತು ಮಂಗಮ್ಮಾಳ್ (1689-1706) ಆಳಿದರು. ಮಂಗಮ್ಮಾಳ್ ಮೊಗಲರ ಸಾಮಂತಳಾಗಿದ್ದಳು. ಇವಳು ಒಳ್ಳೆಯ ಆಡಳಿತಗಾರಳಾಗಿ, ಉದಾರಿಯಾಗಿ, ಅನೇಕ ಜನೋಪಕಾರಿ ಕೆಲಸಗಳನ್ನು ಮಾಡಿ ಪ್ರಸಿದ್ದಳಾದಳು. ಅನಂತರ ಆಳಿದ ವಿಜಯರಂಗ ಚೊಕ್ಕನಾಥನ (1706-1732) ಕಾಲದಲ್ಲಿ ಮದುರೆ ಅವನತಿಹೊಂದಿತು. ಈತ ಬೊಕ್ಕಸದ ಹಣವನ್ನೆಲ್ಲ ದಾನದತ್ತಿಗಳಿಗೆ ವಿನಿಯೋಗಿಸಿ ಬೇಜವಾಬ್ದಾರಿಯಿಂದ ವರ್ತಿಸಿದ. ಇವನ ಹೆಂಡತಿಯಾದ ಮೀನಾಕ್ಷಿಯ ಆಳ್ವಿಕೆಯ ಕಾಲದಲ್ಲಿ (1732-1736) ರಾಜ್ಯದಲ್ಲಿ ಅಂತರ್ಯುದ್ದ ಹೆಚ್ಚಿತು. ಆರ್ಕಾಟಿನ ಚಂದಾ ಸಾಹೇಬನ ಸೈನ್ಯ ಮುತ್ತಿಗೆ ಹಾಕಲಾಗಿ ಈಕೆ ಸೆರೆಸಿಕ್ಕಿ ಆತ್ಮಹತ್ಯೆ ಮಾಡಿಕೊಂಡಳು.

ಮದುರೆಯ ನಾಯಕರ ಆಡಳಿತದಲ್ಲಿ ಪಾಳೆಯಗಾರ ಪದ್ದತಿಯಿತ್ತು. ಲೋಕೋಪಯೋಗಿ ಕಾರ್ಯಗಳು, ದೇವಾಲಯಗಳು ನಿರ್ಮಾಣವಾದುವು. ನೀರಾವರಿ ಮತ್ತು ವ್ಯವಸಾಯ ಅಭಿವೃದ್ಧಿ ಹೊಂದಿದುವು. ಸಂಸ್ಕøತ, ತಮಿಳು ಮತ್ತು ತೆಲುಗು ಭಾಷೆಗಳಿಗೆ ಉತ್ತೇಜನ ದೊರಕಿತು. ಕಲೆ ಮತ್ತು ವಾಸ್ತುಶಿಲ್ಪ ಅಭಿವೃದ್ಧಿ ಹೊಂದಿದುವು. ಮದುರೆ ಪ್ರಸಿದ್ಧ ವಾಸ್ತುಶಿಲ್ಪಕಲಾ ಕೇಂದ್ರವಾಯಿತು.
 												(ವಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ